ಭಟ್ಕಳ : [16 ಅಕ್ಟೋಬರ್] ಉತ್ತರ ಕನ್ನಡ ಜಿಲ್ಲೆಯಲ್ಲಿ ಐ.ಆರ್.ಬಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡೆಸುತ್ತಿರುವ 140 ಕಿ ಮೀ. ಚತುಷ್ಪದ ಹೆದ್ದಾರಿ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ರಾಜ್ಯದ ಮುಖ್ಯಮಂತ್ರಿಗಳ ಮಾತಿಗೂ ಐ.ಆರ್.ಬಿ ಕಂಪನಿ ಬೆಲೆ ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಕಾಮಗಾರಿಯ ವಿರುದ್ದ ಕಾನೂನಾತ್ಮಕ ಹಾಗೂ ಜನಾಂದೋಲನ ನಡೆಸುವುದರ ಮೂಲಕ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಜನಪರ ಸಂಘಟನೆಯ ಅಧ್ಯಕ್ಷ ನಾಗೇಶ ನಾಯ್ಕ ಎಚ್ಚರಿಸಿದರು.
ಭಟ್ಕಳ ತಾಲೂಕಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಐ.ಆರ್.ಬಿ ಕಂಪನಿ ಜನರಿಂದ ಹಗಲು ದರೋಡೆಯನ್ನು ಮಾಡುತ್ತಿದೆ. ಸಾಮಾನ್ಯರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. 3 ವರ್ಷದಲ್ಲಿ ಮುಗಿಯಬೇಕಿದ್ದ ಹೆದ್ದಾರಿ ಕಾಮಗಾರಿ 11 ವರ್ಷಕ್ಕೆ ಮುಂದುವರೆದಿದೆ. ಜಿಲ್ಲೆಯುದ್ದಕ್ಕೂ ಅವೈಜ್ಞಾನಿಕ ಕಾಮಗಾರಿಗಳಿಂದ ಹೆಚ್ಚಿನ ಅಪಘಾತಗಳು ಸಂಭವಿಸಿ ಜೀವ ಹಾನಿ, ಆಸ್ತಿ ಪಾಸ್ತಿ ಹಾನಿ ಉಂಟಾಗಿದೆ. ಇದಕ್ಕೆ ಉದಾಹರಣೆಯಾಗಿ ಅಂಕೋಲ ತಾಲೂಕಿನ ಶಿರೂರ್ ಗುಡ್ಡದ ಕುಸಿತದ ದುರ್ಘಟನೆ ನಮ್ಮ ಕಣ್ಮುಂದಿದೆ. ಆ ಅವಘಡದಲ್ಲಿ 11 ಜನರ ಪ್ರಾಣ ಹಾನಿ ಸಂಭವಿಸಿ ಎಂಟು ಶವಗಳ ಪತ್ತೆಯಾಗಿದೆ. ಮೂರು ಶವಗಳು ಇನ್ನೂ ಕೂಡ ಪತ್ತೆಯಾಗದೆ ಕುಟುಂಬದವರು ಸಂಕಷ್ಟದ ಪರಿಸ್ಥಿತಿಯಲ್ಲಿ ದಿನ ದೂಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಂತ್ರಸ್ಥರ ಕುಟಂಬಕ್ಕೆ ಬಿಡಿಗಾಸು ಮಾತ್ರ ದಕ್ಕಿದ್ದು, ಹೋದ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಇದಕ್ಕೆಲ್ಲಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐ ಆರ್ ಬಿ ಕಂಪನಿ ನೇರ ಹೊಣೆಯಾಗಿದೆ. ಹೆದ್ದಾರಿ ಕಾಮಗಾರಿ ಮಾಡುವಾಗ ಅನುಸರಿಸಬೇಕಾದ ನಿಯಮಾವಳಿಗಳನ್ನು ಗಾಳಿಗೆ ತೂರಿ ರಸ್ತೆ ಕಾಮಗಾರಿಗಳನ್ನು ಅಪೂರ್ಣಗೊಳಿಸಿ, ಹೆದ್ದಾರಿಗಳಲ್ಲಿ ಟೋಲ್ ವಸೂಲಿ ಮಾಡುವ ಮೂಲಕ ಹಗಲು ದರೊಡೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ವಿರುದ್ಧ ಧ್ವನಿ ಎತ್ತುವ ಸಂಘಟನೆಗಳ ಪದಾಧಿಕಾರಿಗಳ ವಿರುದ್ಧ ಧ್ವನಿ ಅಡಗಿಸಲು ನಿಟ್ಟಿನಲ್ಲಿ ಸುಮೋಟೊ ಕೇಸು ದಾಖಲಿಸಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ. ಆದ್ದರಿಂದ ಭಟ್ಕಳ, ಹೊನ್ನಾವರ ಕುಮಟಾ, ಅಂಕೋಲ, ಕಾರವಾರದ ಭಾಗದ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ, ನಾಗರಿಕ ಹಿತಾರಕ್ಷಣಾ ಹೋರಾಟ ಸಮಿತಿ ಸೇರಿದಂತೆ, ರೈತಪರ ಸಂಘಟನೆ, ತಾಲೂಕು ಒಕ್ಕೂಟಗಳು, ವಿವಿಧ ಸಂಘಟನೆಗಳ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಪಡೆದು ಆವೈಜ್ಞಾನಿಕ ಕಾಮಗಾರಿಗಳನ್ನು ನಡೆಸುತ್ತಿರುವ ಮತ್ತು ಕಾಮಗಾರಿ ಪೂರ್ಣಗೊಳಿಸದೆ ಟೋಲ್ ವಸೂಲಾತಿ ಮಾಡುತ್ತಿರುವ ಕ್ರಮವನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿ ಜಿಲ್ಲಾ ಜನಪರ ಹೋರಾಟ ಸಮಿತಿಯ ನೇತೃತ್ವದಲ್ಲಿ ಉಗ್ರ ಹೋರಾಟದ ರೂಪರೇಷೆ ಸಿದ್ಧಪಡಿಸಿ ಜನಾಂದೋಲನ ನಡೆಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ರಾಮ ಮೊಗೇರ, ಹೆದ್ದಾರಿ ಹೋರಾಟ ಸಮಿತಿ ಸಂಚಾಲಕ ರಾಜೇಶ ನಾಯಕ, ರೈತ ಪರ ಸಂಘಟನೆಯ ಅಧ್ಯಕ್ಷ ವಿರಭದ್ರ ನಾಯ್ಕ, ರಾಘವೇಂದ್ರ ನಾಯ್ಕ ಸಿದ್ದಾಪುರ, ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಇಮ್ರಾನ್ ಲಂಖಾ, ತಂಜಿಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಎಂ. ಡಿ ನಾಯ್ಕ, ಟಿ.ಡಿ. ನಾಯ್ಕ, ಗಣಪತಿ ನಾಯ್ಕ, ವಿವಿಧ ಸಂಘಟನೆಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
PRESS NOTE:
1. ಚತುಷ್ಪದ ಅಭಿವೃದ್ಧಿ ಕಾಮಗಾರಿ ಮುಕ್ತಾಯಗೊಳ್ಳುವವರೆಗೆ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಈಗ ಮುಂದುವರೆಸಿರುವ ಅನುಚಿತ ಟೋಲ್ ವಸೂಲಾತಿಯನ್ನು ತಕ್ಷಣದಿಂದ ನಿಲ್ಲಿಸಬೇಕು.
2. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಯಂತ್ರಣದಡಿ IRB ಗುತ್ತಿಗೆದಾರ ಕಂಪನಿ ವತಿಯಿಂದ ಈ ವರೆಗೆ ಮುಕ್ತಾಯವಾಗಿರುವ ಮತ್ತು ಬಾಕಿ ಉಳಿದಿರುವ ಕಾಮಗಾರಿಗಳಲ್ಲಿ ‘ಭೂವಿಜ್ಞಾನ ಸಮೀಕ್ಷಾ ವರದಿ’ ಶಿಫಾರಿತ ಎಲ್ಲ ಮುಂಜಾಗೃತಾ ಸುರಕ್ಷಾ ಕ್ರಮಗಳನ್ನು ಸಂಪೂರ್ಣ ಅಳವಡಿಸಿಸಬೇಕು ಮತ್ತು ಅತಿಶೀಘ್ರವಾಗಿ ಕಾಮಗಾರಿಯನ್ನು ಮುಕ್ತಾಯಗೊಳಿಸಬೇಕು.
3. ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯ ಅವೈಜ್ಞಾನಿಕ ನಿರ್ಮಾಣದ ಪರಿಣಾಮವಾಗಿ ಈ ವರೆಗೆ ಸಂಭವಿಸಿದ ವಾಹನ ಅಪಘಾತ, ಭೂಕುಸಿತದಂತಹ ಘಟನೆಗಳಿಂದ ಸಂಕಷ್ಟಕ್ಕೀಡಾದ ಸಂತೃಸ್ಥರಿಗೆ ಸೂಕ್ತ ಪರಿಹಾರವನ್ನು NHAI ಮತ್ತು IRB ನೀಡಬೇಕು.
4. ಶೀರೂರ ಗುಡ್ಡಕುಸಿತ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ/ಸಂತೃಸ್ತರಿಗೆ ನ್ಯಾಯಕ್ಕಾಗಿ ಹೊನ್ನಾವರ ಪಟ್ಟಣದಲ್ಲಿ 12.9.2024 ರಂದು ಪ್ರತಿಭಟನೆ ನಡೆಸಲು ಸಾಕಷ್ಟು ಮುಂಚಿತವಾಗಿ ಪೋಲೀಸ್ ಅನುಮತಿ ಕೋರಿದಾಗ್ಯೂ ಸಹ ಯಾವುದೇ ಪ್ರತ್ಯುತ್ತರ ನೀಡದೆ ಪಾದಯಾತ್ರೆಯೊಂದಿಗೆ ಶಾಂತಿಯುತ ಪ್ರತಿಭಟನೆ ನಡೆಸಿ ಮಾನ್ಯ ತಹಶಿಲ್ದಾರ್ ಮತ್ತು IRB ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ವಿವಿಧ ಸಂಘಟನೆಗಳ ಮುಖಂಡರುಗಳ ಮೇಲೆ ದಾಖಲಿಸಿರುವ SUMOTO (ಸ್ವಯಂಪ್ರೇರಿತ) ಪ್ರಕರಣವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು.
5. ಸಾರ್ವಜನಿಕ ನ್ಯಾಯಕ್ಕಾಗಿ ನಡೆಸುವ ಹೋರಾಟದ ಧ್ವನಿಯನ್ನು ಹತ್ತಿಕ್ಕುವ NHAI ಮತ್ತು IRB ಹುನ್ನಾರದ ವಿರುದ್ದ ಜಿಲ್ಲೆಯಾದ್ಯಂತ ಜನಾಂದೋಲನ ರೂಪಿಸಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ರೂಪಿಸಲಾಗುವುದು.