ಭಟ್ಕಳ : ತಾಲೂಕಾ ಆಡಳಿತ, ತಾಲೂಕಾ ಪಂಚಾಯತ್, ಪುರಸಭೆ, ಪಟ್ಟಣ ಪಂಚಾಯತ್ ಜಾಲಿ, ಸಮಾಜ ಕಲ್ಯಾಣ ಇಲಾಖೆ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ತಾಲೂಕಿನ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಂಕಾಳ ವೈದ್ಯ ಮಹರ್ಷಿ ವಾಲ್ಮೀಕಿ ಮನುಕುಲಕ್ಕೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ನೀಡಿದ್ದಾರೆ. ಒಬ್ಬ ವ್ಯಕ್ತಿ ಜೀವನದಲ್ಲಿ ಅನೇಕ ತಪ್ಪುಗಳನ್ನು ಮಾಡುತ್ತಾನೆ ಅದೇ ರೀತಿ ಬೇಡ ವಾಲ್ಮೀಕಿಯೂ ಕೂಡ ಅಂತಹ ತಪ್ಪುಗಳನ್ನು ಮಾಡಿದ್ದ. ಆದರೆ ತಾನೂ ಬದಲಾಗಬೇಕೆಂಬ ಉದ್ದೇಶದಿಂದ ದಟ್ಟ ಕಾಡಿನಲ್ಲಿ ತಪಸ್ಸನ್ನು ಮಾಡಿ ಬೇಡನೊಬ್ಬ ವಾಲ್ಮೀಕಿ ಮಹರ್ಷಿಯಾಗಿ ಬದಲಾದ. ಇಂತಹ ಋಷಿವರ್ಯ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತಿದೆ ಎಂದು ಹೇಳಿದರು.
ಉಪನ್ಯಾಸಕ ಭಾಷಣ ಮಾಡಿದ ಸಾಮಾಜಿಕ ಕಾರ್ಯಕರ್ತ ಭಾಸ್ಕರ ನಾಯ್ಕ ಮಹರ್ಷಿ ವಾಲ್ಮೀಕಿಯ ಕಥೆಯನ್ನು ಮನಮುಟ್ಟುವಂತೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಶೈಕ್ಷಣಿಕ ಸಾಧನೆಗೈದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.
ಭಟ್ಕಳದ ಬಿ.ಸಿ.ಎಮ್ ವಸತಿ ನಿಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ ಜಿ.ಎಮ್ ಸ್ವಾಗತಿಸಿದರು, ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ ವಂದಿಸಿದರು, ಸುರೇಶ ಎನ್ ಮುರುಡೇಶ್ವರ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದದಲ್ಲಿ ಸಹಾಯಕ ಆಯುಕ್ತರಾದ ಡಾ. ನಯನಾ ಎನ್, ತಹಶಿಲ್ದಾರರಾದ ಅಶೋಕ್ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೆಂಕಟೇಶ ನಾಯ್ಕ, ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎ. ಮಂಜಪ್ಪ, ಬೆಳ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಗದೀಶ ನಾಯ್ಕ, ಗೊಂಡ ಸಮಾಜದ ಅಧ್ಯಕ್ಷರಾದ ನಾರಾಯಣ ಗೊಂಡ ಮತ್ತಿತರು ಹಾಜರಿದ್ದರು.