ಭಟ್ಕಳ : ತಾಲೂಕಿನ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ತಾಲೂಕಾ ಆಸ್ಪತ್ರೆ ಭಟ್ಕಳ ಹಾಗೂ ಕ್ರೀಯಾಶೀಲ ಗೆಳೆಯರ ಸಂಘ ಭಟ್ಕಳ ಇವರ ಜಂಟಿ ಆಶ್ರಯದಲ್ಲಿ ಮಂಗಳೂರಿನ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಖ್ಯಾತ ವೈದ್ಯರಿಂದ ಭಟ್ಕಳದ ತಾಲೂಕಾ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಭಟ್ಕಳ ತಾಲೂಕಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ಹೇಳಿದರು.
ತಾಲೂಕಾ ಆಸ್ಪತ್ರೆಯ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನವೆಂಬರ್ 24 ರ ಬೆಳಿಗ್ಗೆ 9 ಗಂಟೆಯಿಂದ 12 ಗಂಟೆಯವರೆಗೂ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಎಲುಬು ಹಾಗೂ ಕೀಲೂ ತಜ್ಞರಾದ ಡಾ. ವಿಕ್ರಮ‌್ ಶೆಟ್ಟಿ, ಡಾ. ಪ್ರಥ್ವಿ ಕೆ.ಪಿ , ಶಸ್ತ್ರಚಿಕಿತ್ಸೆ ತಜ್ಞರಾದ ಡಾ. ಅಭಿಜಿತ್ ಶೆಟ್ಟಿ, ಪ್ಲಾಸ್ಟಿಕ್ ಸರ್ಜನ್ ಡಾ. ಭರತ್ ಜೆ ನಾಯ್ಕ ಲಭ್ಯವಿದ್ದು ಈ ವೈದ್ಯಕೀಯ ಶಿಬಿರದ ಪ್ರಯೋಜನವನ್ನು ಭಟ್ಕಳದ ಜನತೆ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿ ಸವಿತಾ ಕಾಮತ್ ಮಾತನಾಡಿ ಈ ಹಿಂದೆ ಖಾಸಗಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳು ಪ್ರತ್ಯೇಕವಾಗಿ ನಡೆಯುತ್ತಿತ್ತು ಆದರೆ ಇದೀಗ ಸರ್ಕಾರದ ಯೋಜನೆಗಳಾದ ಆಯುಷ್ಮಾನ ಭಾರತ, ಯಶಸ್ವಿನಿ ಕಾರ್ಡ್ ಮುಂತಾದ ಆರೋಗ್ಯಕ್ಕೆ ಸಂಬಂಧಿಸಿದ ವಿಮೆಯಿಂದಾಗಿ ಎರಡು ಆಸ್ಪತ್ರೆಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುವಂತಾಗಿದೆ. ತಾಲೂಕಾ ಆಸ್ಪತ್ರೆಯ, ಜಿಲ್ಲಾ ಆಸ್ಪತ್ರೆಯ ಮಟ್ಟಕ್ಕೆ ನಡೆಯುವ ವೈಧ್ಯಕೀಯ ಚಿಕಿತ್ಸೆಗಳು ಆಯಾ ಆಸ್ಪತ್ರೆಯಲ್ಲಿಯೇ ನಡೆಸಬೇಕಾಗುತ್ತದೆ. ಅದರ ಹೊರತಾಗಿ ಈ ಎರಡು ಆಸ್ಪತ್ರೆಯಲ್ಲಿ ಲಭ್ಯವಿರದ ಚಿಕಿತ್ಸೆಗಾಗಿ ಸರ್ಕಾರದ ಸೌಲಭ್ಯದೊಂದಿಗೆ ಖಾಸಗಿ ಆಸ್ಪತ್ರೆಗೆ ಸೂಚಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ದೀಪಕ್ ನಾಯ್ಕ, ತಾಲೂಕಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಮನಮೋಹನ ನಾಯ್ಕ, ಶ್ರೀಕಾಂತ ನಾಯ್ಕ, ರಮೇಶ ಖಾರ್ವಿ ಮತ್ತಿತರು ಹಾಜರಿದ್ದರು.