ಭಟ್ಕಳ : [ ನವೆಂಬರ್ 23 ] ತಾಲೂಕಿನ ಬೆಳ್ನಿ ಗ್ರಾಮದಲ್ಲಿರುವ ಮನೆಯೊಂದಕ್ಕೆ ಇಂದು ಸಂಜೆ ಹೊತ್ತಿಕೊಂಡ ಆಕಸ್ಮಿಕ ಬೆಂಕಿಯಿಂದಾಗಿ ಬಾಗಶಃ ಸುಟ್ಟು ಕರಕಲಾಗಿದೆ.
ಜ್ಯೋತಿ ಮೊಹನ ನಾಯ್ಕ ದಂಪತಿ ಸಂಜೆ 7 ಗಂಟೆಯ ಸುಮಾರಿಗೆ ದೇವರಿಗೆ ದೀಪ ಹಚ್ಚಿ ಮಗನನ್ನು ಕರೆದುಕೊಂಡು ಮಾರುಕಟ್ಟೆಗೆ ತೆರಳಿದ್ದರು. ಈ ಸಮಯದಲ್ಲಿ ಮನೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡಿದ್ದು, ಬೆಂಕಿಯನ್ನು ನೋಡಿ ಅಕ್ಕಪಕ್ಕದ ಮನೆಯವರು ಮನೆ ಯಜಮಾನ ಮೋಹನ್ ನಾಯ್ಕರವರಿಗೆ ಮನೆಗೆ ಬೆಂಕಿ ಹೊತ್ತಿಕೊಂಡಿರುವ ವಿಷಯವನ್ನು ತಿಳಿಸಿದ್ದಾರೆ. ಅಲ್ಲಿಂದ ಮನೆಗೆ ವಾಪಾಸ್ಸು ಹೊರುಟು ಬಂದ ದಂಪತಿಗಳು ಅಕ್ಕಪಕ್ಕದ ಮನೆಯವರು ಹಾಗೂ ಸ್ನೇಹಿತರೊಂದಿಗೆ ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರಲ್ಲೊಳಗಾಗಲೇ ಮನೆಯಲ್ಲಿರುವ ಬಹುತೇಕ ವಸ್ತುಗಳು ಬೆಂಕಿಗೆ ಆಹುತಿಯಾಗಿ ಅಪಾರ ನಷ್ಟ ಸಂಭವಿಸಿದೆ.
ಈ ಅವಘಡದಲ್ಲಿ ಟಿ.ವಿ, ಲ್ಯಾಪ್‌ಟಾಪ್, ಹಣ, ಒಡವೆ, ಬಟ್ಟೆ, ದಾಖಲೆ ಪತ್ರಗಳು, ದವಸ ಧಾನ್ಯ ಸೇರಿದಂತೆ ದಂಪತಿ ಪುತ್ರನ ಶಾಲಾ ಪಠ್ಯ ಪುಸ್ತಕಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.