ಭಟ್ಕಳ: ತಾಲೂಕಿನ ಮುರ್ಡೇಶ್ವರದಲ್ಲಿ ಶಾಲಾ ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮುರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಮುರ್ಡೇಶ್ವರ ಸಮುದ್ರದಲ್ಲಿ ಆಟವಾಡಲು ತೆರಳಿ ನೀರಿನಲ್ಲಿ ಮುಳುಗಿ ಮೃತಪಟ್ಟರೆ, ಮೂವರು ನಾಪತ್ತೆಯಾಗಿದ್ದು, ಮೂವರು ವಿದ್ಯಾರ್ಥಿನಿಯರನ್ನು ರಕ್ಷಿಸಲಾಗಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲಿನ ಮುರಾರ್ಜಿ ದೇಸಾಯಿ ಶಾಲೆಯ ಒಟ್ಟು 46 ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಆಗಮಿಸಿದ್ದರು. ಸಂಜೆ ಸಮುದ್ರದಲ್ಲಿ ಆಟವಾಡುವಾಗ 7 ವಿದ್ಯಾರ್ಥಿನಿಯರು ಅಲೆಯ ರಭಸಕ್ಕೆ ಕೊಚ್ಚಿ ಹೋಗಿ ಆಳ ಸಮುದ್ರದಲ್ಲಿ ಮುಳುಗುವಾಗ ಲೈಫ್‌ಗಾರ್ಡ್ ಸಿಬ್ಬಂದಿ ನಾಲ್ವರ ರಕ್ಷಣೆ ಮಾಡಿ ದಡಕ್ಕೆ ತಂದಿದ್ದಾರೆ. ಅವರಲ್ಲಿ ತೀವ್ರ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ಶ್ರವಂತಿ ಗೋಪಾಲಪ್ಪ (15) ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಉಳಿದ ಮೂವರು ವಿದ್ಯಾರ್ಥಿನಿಯರಾದ ಯಶೋದಾ (15) ವೀಕ್ಷಣಾ (15) ಹಾಗೂ ಲಿಪಿಕಾ (15) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೀಕ್ಷಿತಾ(15), ಲಾವಣ್ಯ (15) ಇನ್ನೊರ್ವ ವಿದ್ಯಾರ್ಥಿನಿ ಸಮುದ್ರದಲ್ಲಿ ಕಣ್ಮರೆಯಾಗಿದ್ದಾರೆ. ಮುರ್ಡೇಶ್ವರ ಪಿಎಸ್‌ಐ ಹಣಮಂತ ಬಿರಾದಾರ ಅವರ ನೇತೃತ್ವದಲ್ಲಿ ಕರಾವಳಿ ಪೊಲೀಸ್ ಪಡೆ ಕಣ್ಮರೆಯಾದವರ ಹುಡುಕಾಟ ಆರಂಭಿಸಿದ್ದಾರೆ.
ಗೊಂದಲದ ವಾತಾವರಣ ನಿರ್ಮಾಣ: ಮೂವರು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಕಣ್ಮರೆಯಾಗಿದ್ದಾರೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಇಲ್ಲ ಅವರು ಪೇಟೆ ಸುತ್ತಲೂ ತೆರಳಿದ್ದಾರೆ ಎಂದು ಹೇಳುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ಶಾಲೆಯ ಶಿಕ್ಷಕರು ಕೂಡ ಈ ಅವಘಡದಿಂದ ಭಯಗೊಂಡಿದ್ದು, ವಿವಿಧ ರೀತಿಯ ಹೇಳಿಕೆ ನೀಡುತ್ತಿರುವುದು ಗೊಂದಲಕ್ಕೆ ಕಾರಣವಾಯಿತು.
ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ, ತಹಸೀಲ್ದಾರ್:
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭಟ್ಕಳ ಉಪವಿಭಾಗಾಧಿಕಾರಿ ಡಾ. ನಯನಾ ಎಸ್. ಹಾಗೂ ತಹಸೀಲ್ದಾರ್ ಅಶೋಕ ಭಟ್ ಭೇಟಿ ನೀಡಿದರು. ಮುರಾರ್ಜಿ ಶಾಲೆಯ ಶಿಕ್ಷಕರನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಉಳಿದ ವಿದ್ಯಾರ್ಥಿನಿಯರಿಗೆ ಮುರ್ಡೇಶ್ವರದಲ್ಲೇ ಉಳಿಯಲು ವ್ಯವಸ್ಥೆ ಕಲ್ಪಿಸಿದ್ದಾರೆ. ಈಗಾಗಲೆ ಮುರ್ಡೇಶ್ವರದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವ ಕುರಿತು ತಾಲೂಕಾಡಳಿತವಾಗಲಿ, ಜಿಲ್ಲಾಡಳಿತವಾಗಲಿ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.