ಭಟ್ಕಳ: [ ಅಕ್ಟೋಬರ್ 24 ] ತಾಲೂಕಿನ ನೌಕರ ಸಂಘದ ಚುನಾವಣೆಯು ಅಕ್ಟೋಬರ್ 28 ರಂದು ವಿದ್ಯಾಂಜಲಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದ್ದು ಅದೇ ದಿನ ಸಂಜೆ ಫಲಿತಾಂಶ ಪ್ರಕಟವಾಗಲಿದೆ.
ತಾಲೂಕಿಗೆ ಮೀಸಲಿಟ್ಟ ಒಟ್ಟು 27 ಸ್ಥಾನಕ್ಕೆ ವಿವಿಧ ಇಲಾಖೆಗಳಿಂದ 45 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 3 ನಾಮಪತ್ರಗಳು ತಿರಸ್ಕøತಗೊಂಡಿದೆ. ಆರೋಗ್ಯ ಇಲಾಖೆಗೆ ಸೇರಿದ ನಾಲ್ಕು ಸ್ಥಾನಗಳಲ್ಲಿ 1 ಸ್ಥಾನ ಖಾಲಿ ಇದ್ದು ಅಕ್ಟೋಬರ್ 21 ರ ನಾಮಪತ್ರ ವಾಪಾಸಾತಿಯ ದಿನದಂದು 9 ಅಭ್ಯರ್ಥಿಗಳು ನಾಮಪತ್ರ ವಾಪಾಸುಪಡೆದುಕೊಂಡಿದ್ದಾರೆ.
26 ಸ್ಥಾನಗಳಿಗೆ 33 ಅಭ್ಯರ್ಥಿಗಳು ಕಣದಲ್ಲಿದ್ದು 18 ಸ್ಥಾನಗಳಲ್ಲಿ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಆ ಅಭ್ಯರ್ಥಿಗಳು ಅವಿರೋಧ ಆಯ್ಕೆಗೊಂಡಂತಾಗಿದೆ. ನ್ಯಾಯಾಂಗ ಇಲಾಖೆ, ತೋಟಗಾರಿಕಾ ಇಲಾಖೆಯಿಂದ ಒಂದೊಂದು ಸ್ಥಾನಗಳಿಗೆ ಇಬ್ಬರೂ ಅಭ್ಯರ್ಥಿಗಳು ಕಣದಲ್ಲಿದ್ದರೆ, ಆರೋಗ್ಯ ಇಲಾಖೆಯ 3 ಸ್ಥಾನಗಳಿಗೆ 5 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಹಾಗೂ ಶಿಕ್ಷಣ ಇಲಾಖೆಯ 3 ಸ್ಥಾನಕ್ಕೆ 6 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಚುನಾವಣಾಧಿಕಾರಿಯಾಗಿ ರಾಘವೇಂದ್ರ ನಾಯ್ಕ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಕರಿಯಪ್ಪ ನಾಯ್ಕ ಕಾರ್ಯನಿರ್ವಹಿಸುತ್ತಿದ್ದಾರೆ.